ಯಶ್‌ ಬರ್ತ್‌ಡೇ; ಅಭಿಮಾನಿಗಳಲ್ಲಿ ‘ರಾಕಿ ಭಾಯ್’ ಪ್ರೀತಿಯಿಂದ ಮಾಡಿದ ಮನವಿ ಏನು?

ಹೈಲೈಟ್ಸ್‌:

  • ಜನವರಿ 8ರಂದು ರಾಕಿ ಭಾಯ್‌ ಯಶ್‌ಗೆ ಹುಟ್ಟುಹಬ್ಬ
  • ಈ ಬಾರಿ ಅದ್ದೂರಿಯಾಗಿ ನಡೆಯಲಿದೆಯೇ ಯಶ್‌ ಬರ್ತ್‌ಡೇ?
  • ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಟ್ರೈಲರ್ ರಿಲೀಸ್ ಆಗೋದು ಯಾವಾಗ?

ರಾಕಿಂಗ್ ಸ್ಟಾರ್’ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಅವರನ್ನು ಬಲು ಎತ್ತರಕ್ಕೆ ಕೊಂಡೊಯ್ದಿದೆ. ಇದೇ ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ. ನೆಚ್ಚಿನ ಸ್ಟಾರ್ ಹುಟ್ಟುಹಬ್ಬ ಎಂದಾಗ ಫ್ಯಾನ್ಸ್ ನಿರೀಕ್ಷೆ ಜಾಸ್ತಿ ಇರುತ್ತದೆ. ಈ ಬಾರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಇರುತ್ತದಾ? ಅದರಲ್ಲೂ ‘ಕೆಜಿಎಫ್: ಚಾಪ್ಟರ್ 2‘ ರಿಲೀಸ್‌ಗೆ ರೆಡಿ ಇರುವುದರಿಂದ, ಅದರ ಟ್ರೈಲರ್ ರಿಲೀಸ್‌ ಆಗಲಿದೆಯಾ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದೆಲ್ಲದಕ್ಕೂ ರಾಕಿ ಭಾಯ್ ಉತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಪಾನಿಪುರಿ ಕಿಟ್ಟಿ ಶುರು ಮಾಡಿರುವ ಹೊಸ ಹೋಟೆಲ್‌ವೊಂದರ ಉದ್ಘಾಟನೆಗೆ ಆಗಮಿಸಿದ್ದ ರಾಕಿಂಗ್ ಸ್ಟಾರ್‌, ಮಾಧ್ಯಮಗಳ ಜೊತೆಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಬಾರಿ ಅದ್ದೂರಿ ಬರ್ತ್‌ಡೇ ಇಲ್ಲ!
‘ನನ್ನ ಬರ್ತ್‌ಡೇ ನನ್ನದಲ್ಲ ಅದು. ಅಭಿಮಾನಿಗಳು ಅದನ್ನು ಯಾವ ರೀತಿ ಮಾಡ್ತಾರೆ ಅನ್ನೋದು ಮುಖ್ಯ. ಸರ್ಕಾರದ ರೂಲ್ಸ್ ಇದೆ. ಎಲ್ಲರು ಎಲ್ಲೆಲ್ಲಿ ಇರ್ತಾರೋ, ಅಲ್ಲಿಂದಲೇ ವಿಶ್‌ ಮಾಡೋದು ಒಳ್ಳೆಯದು. ಇದೊಂದು ವರ್ಷ ಹಾಗೆ ನಡೆಯಲಿ. ಎಲ್ಲ ಸರಿ ಹೋಗ್ತಾ ಇದೆ, ಮತ್ತೇನೋ ಬರ್ತಾ ಇದೆ ಅನ್ನೋವಾಗ ನಾವು ಕೂಡ ಹುಷಾರಾಗಿ ಇರಬೇಕು. ನನ್ನ ಹುಟ್ಟುಹಬ್ಬ ಆಚರಣೆ ಮಾಡಿ, ಮಾಡಬೇಡಿ ಅಂತ ನಾನು ಫ್ಯಾನ್ಸ್‌ಗೆ ಹೇಳೋದಿಲ್ಲ ಅಂತ ಎರಡು ವರ್ಷಗಳ ಹಿಂದೆ ಹೇಳಿದ್ದೆ. ಆದರೆ, ಒಂದು ಮನವಿ ಮಾಡ್ಕೋತಾ ಇದ್ದೇನೆ, ನೀವು ಪ್ರೀತಿಯಿಂದ ಎಲ್ಲಿ ಇರುತ್ತೀರೋ, ಅಲ್ಲಿಂದಲೇ ವಿಶ್‌ ಮಾಡಿದರೆ ಸಾಕು’ ಎಂದು ರಾಕಿ ಭಾಯ್ ಹೇಳಿದ್ದಾರೆ.

ಜನವರಿ 8ಕ್ಕೆ ‘ಕೆಜಿಎಫ್ 2’ ಟ್ರೈಲರ್ ರಿಲೀಸ್ ಇಲ್ಲ!
‘ನನ್ನ ಜನ್ಮದಿನ ಜನವರಿ 8ಕ್ಕೆ ಇದೆ. ಕೆಜಿಎಫ್ 2 ಸಿನಿಮಾ ಏ.14ಕ್ಕೆ ತೆರೆಗೆ ಬರಲಿದೆ. ಹಾಗಾಗಿ, ನಾವು ಈಗಲೇ ಟ್ರೈಲರ್ ರಿಲೀಸ್ ಮಾಡಿದರೆ ತುಂಬ ಗ್ಯಾಪ್ ಆಗಲಿದೆ. ಸುಮ್ಮನೇ ಏನಾದರೂ ಕೊಡಬೇಕಲ್ಲ ಅಂತ ಕೋಡೋದಕ್ಕಿಂತ, ಸ್ವಲ್ಪ ದಿನ ಅಡ್ಜಸ್ಟ್ ಮಾಡಿಕೊಂಡರೆ, ಒಳ್ಳೆಯದೇನಾದರೂ ಕೊಡಬಹುದು’ ಎಂದು ‘ರಾಕಿಂಗ್ ಸ್ಟಾರ್’ ಯಶ್ ಹೇಳಿದ್ದಾರೆ

ಪುಳಿಯೋಗರೆ ತಿನ್ನೋಕೆ ಬಿಟ್ಟಿರಲಿಲ್ಲ ಪಾನಿಪುರಿ ಕಿಟ್ಟಿ
ಅಂದಹಾಗೆ, ಯಶ್‌ಗೆ ಅನೇಕ ವರ್ಷಗಳಿಂದ ಜಿಮ್ ಟ್ರೈನರ್ ಆಗಿರುವುದು ಪಾನಿಪುರಿ ಕಿಟ್ಟಿ. ಹಾಗಾಗಿ, ಕಿಟ್ಟಿ ಬಗ್ಗೆ ಯಶ್‌ಗೆ ಅಪಾರ ಗೌರವ. ಕಿಟ್ಟಿ ಯಾವ ಥರ ತಯಾರಿ ನೀಡುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ನೀಡಿದ್ದಾರೆ ಯಶ್‌. ‘ನನಗೆ ಏನು ಸಿಕ್ಕರೂ ನಾನು ತಿನ್ನುತ್ತೇನೆ. ಆದರೆ, ಕಿಟ್ಟಿ ತಿನ್ನಲು ಬಿಡುವುದಿಲ್ಲ. ಒಮ್ಮೆ ಮೇಲುಕೋಟೆಗೆ ಹೋಗಿದ್ದೆ. ನನಗೆ ಪುಳಿಯೋಗರೆ ಎಂದರೆ ತುಂಬ ಇಷ್ಟ. ಅಲ್ಲಿ ನನ್ನ ಸ್ನೇಹಿತರು ಪುಳಿಯೋಗರೆ ಮತ್ತು ಸಕ್ಕರೆ ಪೊಂಗಲ್ ತಂದುಕೊಟ್ಟರು. ಆದರೆ, ಕಿಟ್ಟಿ ಅದನ್ನು ಟೇಸ್ಟ್ ಮಾಡುವುದಕ್ಕೂ ಬಿಡಲಿಲ್ಲ. ಅಷ್ಟೊಂದು ಕಟ್ಟುನಿಟ್ಟಿನ ಡಯೆಟ್ ಮಾಡಿಸುತ್ತಾರೆ’ ಎಂದರು ಯಶ್‌.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *