ಶಿವಮೊಗ್ಗದಲ್ಲಿ ಒಂದೇ ಕುಟುಂಬದ 9 ಜನ ಘರ್‌ ವಾಪಸಿ; ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್‌!

ಹೈಲೈಟ್ಸ್‌:

  • 9 ಜನರಿರುವ ಕುಟುಂಬವೊಂದು ಕ್ರಿಶ್ಚಿಯನ್‌ ಧರ್ಮ ತೊರೆದು ಮಾತೃ ಧರ್ಮಕ್ಕೆ
  • ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿಗಳಾದ ಜಯಶೀಲನ್‌ ಮತ್ತು ಜಯಮ್ಮ ಎಂಬುವರು ತಮ್ಮ ಕುಟುಂಬದ ಸಮೇತ ಹಿಂದೂ ಧರ್ಮಕ್ಕೆ ವಾಪಸ್‌
  • ಜಯಶೀಲನ್‌ ಅವರ ತಂದೆ ಏಳುಮಲೈ ಎನ್ನುವವರು ಸುಮಾರು 40 ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.

ಶಿವಮೊಗ್ಗರಾಜ್ಯದಲ್ಲಿ ಮತಾಂತರ ಕಾಯಿದೆಯ ಬಗ್ಗೆ ಚರ್ಚೆ ಬಿಸಿ ಬಿಸಿಯಾಗಿರುವಾಗಲೇ ಭದ್ರಾವತಿಯಲ್ಲಿ ಒಂದೇ ಕುಟುಂಬದ 9 ಜನ ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್‌ ಆಗಿದ್ದಾರೆ.

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿಗಳಾದ ಜಯಶೀಲನ್‌ ಮತ್ತು ಜಯಮ್ಮ ಎಂಬುವರು ತಮ್ಮ ಕುಟುಂಬದ ಸಮೇತ ಹಿಂದೂ ಧರ್ಮಕ್ಕೆ ಭಾನುವಾರ ಮರಳಿದ್ದಾರೆ.

40 ವರ್ಷಗಳ ಹಿಂದೆ ಮತಾಂತರ
ಜಯಶೀಲನ್‌ ಅವರ ತಂದೆ ಏಳುಮಲೈ ಎನ್ನುವವರು ಸುಮಾರು 40 ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ, ಕುಟುಂಬದವರ್ಯಾರು ಚರ್ಚ್ ಗೆ ಹೋಗುತ್ತಿರಲಿಲ್ಲ. ಬದಲಿಗೆ ಹಿಂದೂ ಧರ್ಮದ ಆಚರಣೆಗಳನ್ನೇ ಪಾಲಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಎರಡು ವರ್ಷಗಳ ಹಿಂದಿನಿಂದ ಜಯಶೀಲನ್‌ ಮತ್ತು ಜಯಮ್ಮ ಅವರ ಕುಟುಂಬ ಹಿಂದೂ ಧರ್ಮಕ್ಕೆ ಮರಳುವ ಪ್ರಯತ್ನದಲ್ಲಿದ್ದರು ಎಂದು ತಿಳಿದುಬಂದಿದೆ. ಭದ್ರಾವತಿಯ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಮುಖಂಡರು ಜಯಶೀಲನ್‌ ಕುಟುಂಬವರೊಡನೆ ಮಾತನಾಡಿ, ಅವರ ಕುಟುಂಬ ಸದಸ್ಯರಾದ ಪ್ರಭಾಕರನ್‌, ಅವರ ಪತ್ನಿ ಲಲಿತಾ ಪ್ರಭಾಕರನ್‌ ಹಾಗೂ ಮಕ್ಕಳಾದ ಭರತ್‌ ಕುಮಾರ್‌, ಭಾವನಾ, ದ್ವಿತೀಯ ಪುತ್ರ ಪ್ರಕಾಶ್‌, ಶ್ವೇತಾ ಪ್ರಕಾಶ್‌, ಪುತ್ರಿ ಪೃಥ್ವಿ ಹಿಂದೂ ಧರ್ಮಕ್ಕೆ ವಾಪಸ್‌ ಆಗಿದ್ದಾರೆ.

ರಾಮ ಭಜನಾ ಮಂದಿರದಲ್ಲಿ ಘರ್‌ ವಾಪಸಿ
ಘರ್‌ ವಾಪಸಿ ಕಾರ್ಯಕ್ರಮವು ಭದ್ರಾವತಿ ಜನ್ನಾಪುರದ ಸಾರ್ವಜನಿಕ ರಾಮ ಭಜನಾ ಮಂದಿರದಲ್ಲಿ ಕೃಷ್ಣಮೂರ್ತಿ ಸೋಮಯಾಜಿ, ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆಯಿತು.

ಈ ವೇಳೆ ವಿಶ್ವಹಿಂದೂ ಪರಿಷತ್ತಿನ ಪ್ರಮುಖರಾದ ಹಾ. ರಾಮಪ್ಪ, ಡಿ.ಆರ್‌.ಶಿವಕುಮಾರ್‌, ವೈ.ಎಸ್‌.ರಾಮಮೂರ್ತಿ, ಎಸ್‌. ನಾರಾಯಣ್‌, ಪಿ. ಮಂಜುನಾಥ್‌ ರಾವ್‌, ಶೈಲೇಶ್‌ ಕೋಟಿ, ಸಿ. ಮಹೇಶ್ವರಪ್ಪ ಶಿವಮೂರ್ತಿ ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *