RTPCR: ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ 20 ಬಸ್ ಗಡಿಯಲ್ಲೇ ವಾಪಸ್
ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ(Corona) ರೂಪಾಂತರಿ ಓಮೈಕ್ರಾನ್(Omicron) ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದರು ಓಮೈಕ್ರಾನ್ ಆರ್ಭಟ ನಿಲ್ಲುತ್ತಿಲ್ಲ. ರಾಜ್ಯದಲ್ಲಿ ಇಂದೂ ಸಹ 10 ಓಮೈಕ್ರಾನ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಇನ್ನೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇನ್ನು ಮಹಾರಾಷ್ಟ್ರದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕವು ಮಹಾರಾಷ್ಟ್ರ ಗಡಿ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟೆಚ್ಚರವನ್ನು ಹೆಚ್ಚಿಸಿದೆ. ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ಗಳನ್ನು ವಾಪಸ್ ಕಳುಹಿಸಲಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕೋವಿಡ್ ಸ್ಕ್ರೀನಿಂಗ್ ಅನ್ನು ಹೆಚ್ಚಿಸಿರುವ ಕಾರಣ ಬಸ್ಸಿನಲ್ಲಿ ಹೆಚ್ಚಿನ ಪ್ರಯಾಣಿಕರು RT-PCR ನೆಗೆಟಿವ್ ವರದಿ ಹೊಂದಿರದ ಕಾರಣ ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ 20ಕ್ಕೂ ಹೆಚ್ಚು ಬಸ್‌ಗಳನ್ನು ವಾಪಸ್ ಕಳುಹಿಸಲಾಗಿದೆ. ಬೆಳಗಾವಿಯ ಬಳಿ ಈ ಬಸ್‌ಗಳನ್ನು ನಿಲ್ಲಿಸಿ ಪರಿಶೀಲನೆ ಮಾಡಿ ವಾಪಸ್ ಕಳುಹಿಸಲಾಗಿದೆ.
ರಾಜ್ಯದಲ್ಲಿ ಇಂದು 10 ಓಮೈಕ್ರಾನ್ ಪ್ರಕರಣಗಳು ಪತ್ತೆ
ರಾಜ್ಯದಲ್ಲಿ ಇಂದು 10 ಜನರಲ್ಲಿ ಓಮೈಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರನ್ನು ಕ್ವಾರೆಂಟೈನ್ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 276ಕ್ಕೆ ಏರಿಕೆ ಆಗಿದೆ. ಇಂದು ಪತ್ತೆಯಾಗಿರುವ ಓಮೈಕ್ರಾನ್ ಪ್ರಕರಣದಲ್ಲಿ 8 ಕೇಸುಗಳು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ರೆ,ಧಾರವಾಡದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ಎಂಟು ಪ್ರಕರಣಗಳಲ್ಲಿ ಐದು ಜನರು ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ
ಸೋಂಕಿತ ವ್ಯಕ್ತಿ ಡೀಟೈಲ್ಸ್ ಇಲ್ಲದೇ ಆರೋಗ್ಯ ಇಲಾಖೆ ಪರದಾಟ
ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಲ್ಯಾಬ್ ನ ಯಡವಟ್ಟಿನಿಂದ ಆತಂಕ ಎದುರಾಗಿದೆ. ಖಾಸಗಿ ಲ್ಯಾಬ್ಗೆ ಟೆಸ್ಟಿಂಗ್ ಗೆ ಬಂದಿರೋ ವ್ಯಕ್ತಿಯ ಡೇಟಾ ಕಲೆಕ್ಟ್ ಮಾಡದೇ ಬಿಟ್ಟರೋ ಲ್ಯಾಬ್ ಸಿಬ್ಬಂದಿಯ ಎಡವಟ್ಟಿನಿಂದ ಕೊರೊನಾ ಭಯ ಹೆಚ್ಚಾಗಿದೆ.ಡಿಸಂಬರ್ 28ಕ್ಕೆ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟಿಂಗ್ ಮಾಡಿಸಿಕೊಂಡಿರೋ ವ್ಯಕ್ತಿಯಲ್ಲಿ ಡಿಸೆಂಬರ್ 29ಕ್ಕೆ ಕೊರೊನಾ ಸೋಂಕು ಪತ್ತೆಯಾಗಿದೆ, ಅದರಲ್ಲೂ ಜಿನೋಮ್ ಸಿಕ್ವೇನ್ಸ್ ನಿಂದ ಇಂದು ಓಮೈಕ್ರಾನ್ ರಿಪೋರ್ಟ್ ಬಂದಿದ್ದು, ಆ ವ್ಯಕ್ತಿಯಲ್ಲಿ ಓಮೈಕ್ರಾನ್ ರೂಪಾಂತರಿ ವೈರಸ್ ಪತ್ತೆಯಾಗಿದೆ, ಆದರೆ ಆ ವ್ಯಕ್ತಿಯ ಬಗ್ಗೆ ಮಾಹಿತಿ ಇಲ್ಲದಿರುವುದು ತಲೆನೋವಾಗಿ ಪರಿಣಮಿಸಿದೆ.
ಲಾಕ್ ಡೌನ್ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ
ಇನ್ನು ಜನರು ಸಹಕಾರ ನೀಡಿದ್ರೆ.. ಲಾಕ್ ಡೌನ್ ಮಾಡೋದಿಲ್ಲ. ಒಂದು ವೇಳೆ ಜನರು ಕೊರೋನಾ ನಿಯಮಗಳನ್ನು ಅನುಸರಿಸದೇ ಇದ್ರೇ.. ಲಾಕ್ ಡೌನ್ ಮಾಡೋದು ಅನಿವಾರ್ಯವಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಸಾಲದು ಎಂಬಂತೆ ನಿನ್ನೆ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ತಜ್ಞರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಟಫ್ ರೂಲ್ಸ್ ಜಾರಿಗೆ ಸಲಹೆ ನೀಡಿದ್ದಾರೆ. ಅದರಂತೆ ಕಠಿಣ ನಿಯಮಗಳನ್ನು ಜಾರಿ ಮಾಡುತ್ತೇವೆ. ಒಂದು ವೇಳೆ ಜನರು ಕಠಿಣ ನಿಯಮಕ್ಕೆ ಸಹಕಾರ ನೀಡದಿದ್ದರೆ ಲಾಕ್ ಡೌನ್ ಜಾರಿ ಮಾಡಬೇಕಾಗುತ್ತೆ ಎಂದು ನಿನ್ನೆ ಕಂದಾಯ ಸಚಿವ ಆರ್ ಅಶೋಕ್ ಪರೋಕ್ಷವಾಗಿ ಲಾಕ್ಡೌನ್ ಸುಳಿವು ನೀಡಿದ್ದರು.
ಕೋವಿಡ್ ತಡೆಯಲು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ
ರಾಜ್ಯದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಕೋವಿಡ್ ತಡೆಯಲು ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 28ರಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಜನವರಿ 7ರ ತನಕ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದೆ.. ಇದೇ ರೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಾ ಹೋದರೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡುವ ಎಲ್ಲಾ ಸಾಧ್ಯತೆಗಳು ಇವೆ