ಚಿತ್ರಮಂದಿರ, ಮಾಲ್, ಬಾರ್, ಪಬ್​ಗಳಿಗೆ 50:50 ನಿಯಮ ಜಾರಿ; ಕೊರೊನಾ ಮಾರ್ಗಸೂಚಿಯ ವಿವರ ಇಲ್ಲಿದೆ

ಬೆಂಗಳೂರು: ಕೊವಿಡ್ ಬಹಳ ವೇಗವಾಗಿ ಹರಡ್ತಾ ಇದೆ. ಕಾರ್ಯಪಡೆ ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ 6 ತಿಂಗಳಿನಿಂದ ಕೊವಿಡ್ ನಿಯಂತ್ರಣದಲ್ಲಿತ್ತು. ಆದರೆ ಈಗ ಹೆಚ್ಚಾಗುತ್ತಿದೆ. ಪಾಸಿಟಿವಿಟಿ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕ್ರಮ ಅನಿವಾರ್ಯವಾಗಿತ್ತು. ಬೆಂಗಳೂರನ್ನು ಒಂದು ರಾಜ್ಯವಾಗಿ ಪರಿಗಣಿಸಿ ಪ್ರತ್ಯೇಕ ಸ್ಟ್ರಾಟಜಿ ಮಾಡಲು ನಿರ್ಧರಿಸಿದ್ದೇವೆ. ಕೊರೊನಾದ ಮೊದಲು ಎರಡೂ ಅಲೆಗಳಲ್ಲಿ ಬೆಂಗಳೂರು ಸೋಂಕಿನ ಕೇಂದ್ರವಾಗಿತ್ತು. ಬೆಂಗಳೂರಿನಲ್ಲಿ ಈಗಲೂ ಅದೇ ಸ್ಥಿತಿ ಮುಂದುವರಿದಿದೆ. ಶೇ 85ರಿಂದ 90ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ಕಂಡು ಬರುತ್ತಿವೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರನನ್ನು 8 ವಲಯಗಳಾಗಿ ವಿಂಗಡಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಮೈಕ್ರೊ ಮ್ಯಾನೇಜ್​ಮೆಂಟ್​ಗೆ ಒತ್ತು ನೀಡಿದ್ದೇವೆ. ಸಣ್ಣಸಣ್ಣ ವಿಷಯಗಳಿಗೂ ವೈಜ್ಞಾನಿಕವಾಗಿ ಗಮನಕೊಟ್ಟು ನಿರ್ವಹಿಸುತ್ತಿದ್ದೇವೆ. 198 ವಾರ್ಡ್​ಗಳಿಗೆ ಕ್ಷೇತ್ರವಾರು ಆಂಬುಲೆನ್ಸ್ ಕೊಟ್ಟಿದ್ದೇವೆ. ಗೋವಾ, ಮಹಾರಾಷ್ಟ್ರ, ಕೇರಳದಂಥ ರಾಜ್ಯಗಳಿಂದ ಬರುವ ಪ್ರಯಾಣಿಕರಲ್ಲಿ ರೈಲು, ರಸ್ತೆ ಅಥವಾ ವಿಮಾನದಿಂದ ಬಂದರೂ ನಿಗಾ ಇರಿಸಲು ಕಡ್ಡಾಯವಾಗಿ ಆರ್​ಟಿಪಿಸಿಆರ್ ತರಲು ನಿಯಮ ತಂದಿದ್ದೇವೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.

ನಾವು ಕ್ರಮ ತೆಗೆದುಕೊಳ್ಳುತ್ತಿರುವ ಕಾರಣದಿಂದ ಯಾರೂ ಆತಂಕಕ್ಕೆ ಒಳಗಾಗಬಾರದು. ಮೊದಲ ಎರಡು ಅಲೆಗಳಿಗೆ ಹೋಲಿಸಿದರೆ ಇದು ಅಷ್ಟು ಭೀಕರವಾಗಿ ವ್ಯಾಧಿ ಅಂತೂ ಅಲ್ಲ. ವೆಂಟಿಲೇಟರ್ ಮತ್ತು ಆಕ್ಸಿಜನ್ ಅವಶ್ಯಕತೆ ಬಹಳ ಕಡಿಮೆಯಿದೆ. ಅತಿಹೆಚ್ಚು ಸೋಂಕಿತರು ಇಲ್ಲಿ ಆದಾಗ ಆಸ್ಪತ್ರೆಗಳ ಮೇಲೆ ಒತ್ತಡ ಬೀರುತ್ತೆ. ಪರಿಸ್ಥಿತಿ ನಮ್ಮ ಕೈಮೀರಿ ಹೋಗದಂತೆ ತಡೆಯಲು ಮುಂದಾಲೋಚನೆಯಿಂದ ಈ ಕ್ರಮ ತೆಗೆದುಕೊಂಡಿದ್ದೇವೆ. ಜನರು ಕಡ್ಡಾಯವಾಗಿ ಮಾಸ್ಕ್​ಗಳನ್ನು ಧರಿಸಬೇಕು. ಇಲ್ಲದಿದ್ದರೆ ಫೈನ್ ಕಟ್ಟುನಿಟ್ಟಾಗಿ ವಸೂಲು ಮಾಡುತ್ತೇವೆ ಎಂದು ಹೇಳಿದ್ದಾರೆ.

ಎಲ್ಲ ರೀತಿಯ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿದೆ. ಮುಂದಿನ 2 ವಾರಗಳು ಯಾರೂ ಸಮಾರಂಭಗಳಲ್ಲಿ ಪಾಲ್ಗೊಳ್ಳಬಾರದು. ಪ್ರತಿಯೊಬ್ಬ ವ್ಯಕ್ತಿ, ಸಂಘ-ಸಂಸ್ಥೆಯ ಪದಾಧಿಕಾರಿಗಳು ಜನರ ಆರೋಗ್ಯ ಕಾಪಾಡಲು ಸಹಕರಿಸಬೇಕು. ವಿದೇಶಗಳಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡುತ್ತೇವೆ. ಮನೆಗಳಿಗೆ ಕಳಿಸುವುದಿಲ್ಲ. ಬಜೆಟ್ ಹೊಟೆಲ್​ಗಳಲ್ಲಿ ಸರ್ಕಾರವೇ ಪಾವತಿಸುತ್ತದೆ. 4 ಸ್ಟಾರ್, 5 ಸ್ಟಾರ್​ ಹೊಟೆಲ್​ಗಳಲ್ಲಿ ಕ್ವಾರಂಟೈನ್ ಆಗುವವರು ಅವರೇ ಪಾವತಿಸಬೇಕಾಗುತ್ತದೆ ಎಂದು ಸುಧಾಕರ್ ಹೇಳಿದ್ದಾರೆ.

ಕೊರೊನಾ ನೂತನ ಮಾರ್ಗಸೂಚಿಗೆ ಸಂಬಂಧಿಸಿ ಸರ್ಕಾರದ ತೀರ್ಮಾನಗಳೇನು?

  • ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್​ಲೈನ್​ ತರಗತಿ ನಿಲ್ಲುತ್ತದೆ. ಶಾಲಾ ಕಾಲೇಜುಗಳು ಆನ್​ಲೈನ್ ವಿಧಾನದಲ್ಲಿ ನಡೆಯುತ್ತದೆ.
  • ಕರ್ನಾಟಕ ರಾಜ್ಯಾದ್ಯಂತ 6ನೇ ತಾರೀಖಿನಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರುತ್ತದೆ.
  • ವೀಕೆಂಡ್ ಕರ್ಫ್ಯೂ ವೇಳೆ ಆಹಾರ ವಸ್ತು, ಹೊಟೆಲ್​ಗಳಲ್ಲಿ ಪಾರ್ಸೆಲ್​, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್‌, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
  • ಸರ್ಕಾರಿ ಕಚೇರಿಗಳು, ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ಚಿತ್ರಮಂದಿರ, ಮಾಲ್, ಬಾರ್, ಪಬ್​ಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ (50:50 ನಿಯಮ) ಪ್ರವೇಶ ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಲಸಿಕೆ ಕಡ್ಡಾಯ ಆಗಿರಲಿದೆ.
  • ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಡಬಲ್ ಡೋಸ್ ಕಡ್ಡಾಯ ಆಗಿರಲಿದೆ. ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ. ಅವರಿಗೂ 2 ಡೋಸ್ ಆಗಿರಬೇಕು.
  • ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್​ಟಿಪಿಸಿಆರ್ ಕಡ್ಡಾಯ ಆಗಿರಲಿದೆ.
  • ವಿದೇಶಿ ಪ್ರಯಾಣಿಕರ ಟ್ರ್ಯಾಕಿಂಗ್-ಟ್ರೇಸಿಂಗ್ ಬಲಪಡಿಸಲು ತೀರ್ಮಾನಿಸಲಾಗಿದೆ. ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್‌, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
  • ಶಾಲಾ ಕಾಲೇಜು ರಜೆ ಬೆಂಗಳೂರಿಗೆ ಮಾತ್ರ ಅನ್ವಯ ಆಗುತ್ತದೆ. ಆದರೆ, ಉಳಿದ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *