ಪದವಿ ಕಾಲೇಜುಗಳಲ್ಲಿ ಪತ್ರಿಕೋದ್ಯಮ ವಿಷಯ ಆರಂಭಕ್ಕೆ ಸಿಎಂಗೆ ಮನವಿ
ಕಲಬುರಗಿ: ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ ಪತ್ರಿಕೋದ್ಯಮ ವಿಷಯವನ್ನು ಐಚ್ಚಿಕ ವಿಷಯವನ್ನಾಗಿ ಪ್ರಾರಂಭಿಸಬೇಕೆಂದು ಹಿರಿಯ ಪತ್ರಕರ್ತ, ಬಯಲು ಗ್ರಂಥಾಲಯದ ಸಂಸ್ಥಾಪಕ ಸುಭಾಷ್ ಬಣಗಾರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮಂಗಳವಾರ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಅವರು, ರಾಜ್ಯದ ಎಲ್ಲಾ ವಿಶವಿದ್ಯಾಲಯಗಳಲ್ಲಿ ಡಿಪ್ಲೋಮಾ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಗಳು ಇವೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿನ ಬೆರಳೆಣಿಕೆಯ ಕಾಲೇಜುಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಡಾ ಕಾಲೇಜುಗಳಲ್ಲಿ ಪತ್ರಿಕೋದ್ಯಮ ವಿಭಾಗ ಇಲ್ಲದ ಕಾರಣ, ಎಂ.ಎ.ದಲ್ಲಿ ಪತ್ರಿಕೋದ್ಯಮ ವಿಷಯವನ್ನು ಸರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಬಿ.ಎ.ದಲ್ಲಿ ಮೂರು ವರ್ಷ ಪತ್ರಿಕೋದ್ಯಮವನ್ನು ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡಿದರೆ, ಎಂ.ಎ. ಪತ್ರಿಕೋದ್ಯಮದಲ್ಲಿ ಹೆಚ್ಚಿನ ಅಭ್ಯಾಸಕ್ಕೆ ಅನುಕೂಲವಾಗುವುದರ ಜೊತೆಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಪತ್ರಕರ್ತರು ಹೊರಬರಲು ಸಾಧ್ಯವಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಜೊತೆಗೆ ಎಂ.ಎ.ದಲ್ಲಿ ಪತ್ರಿಕೋದ್ಯಮ ಮುಗಿಸಿರುವ, ಪತ್ರಿಕೋದ್ಯಮ ವಿಷಯದಲ್ಲಿ ಪಿಎಚ್.ಡಿ. ಮಾಡಿ ಖಾಲಿ ನೂರಾರು ವಿದ್ಯಾರ್ಥಿಗಳಿಗೆ ಉಪನ್ಯಾಸಕ ಹುದ್ದೆ ದೊರೆತಂತಾಗುತ್ತದೆ. ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿರಾಜ್ಯಶಾಸ್ತ್ರ ಅರ್ಥಶಾಸ್ತ್ರ, ಇತಿಹಾಸ, ಕನ್ನಡ, ಇಂಗ್ಲಿಷ್, ಸಮಾಜ ಶಾಸ್ತ್ರದಂತರೆ ಪತ್ರಿಕೋದ್ಯಮ ವಿಷಯವನ್ನು ಐಚ್ಚಿಕ ವಿಷಯವನ್ನಾಗಿ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.