Anushka Sharma: ಕ್ರಿಕೆಟ್ ಪ್ಲೆಯರ್‌ ಆಗ್ತಿದ್ದಾರಂತೆ ವಿರಾಟ್​ ಪತ್ನಿ! ಸೂಪರ್​ ಕಮ್‌ ಬ್ಯಾಕ್‌ ಎಂದ ಫ್ಯಾನ್ಸ್..

ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma,) ತಮ್ಮ ಎಲ್ಲಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಏಕೆಂದರೆ ಅವರು ಬೆಳ್ಳಿ ಪರದೆಯ ಮೇಲೆ ಪುನಃ ಮಿಂಚಲು ಸಿದ್ಧರಾಗಿದ್ದಾರೆ. ಶಾರುಖ್ ಖಾನ್ ಎದುರು 2018ರ ಝೀರೋ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಅನುಷ್ಕಾ, ಅವರ ಮುಂಬರುವ ಕ್ರೀಡಾ ಸಿನಿಮಾ ಚಕ್ಡಾ ಎಕ್ಸ್‌ಪ್ರೆಸ್‍ನಲ್ಲಿ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸುವ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ.ತಮ್ಮ ಇನ್‍ಸ್ಟಾಗ್ರಾಮ್ ಚಕ್ಡಾ ಎಕ್ಸ್‌ಪ್ರೆಸ್ (Chakda Express cinema) ಸಿನಿಮಾದ ಸಣ್ಣ ಝಲಕ್ ಪೋಸ್ಟ್ ಮಾಡಿರುವ ಅನುಷ್ಕಾ ಶರ್ಮಾ ಭಾರತೀಯ ಮಹಿಳಾ (women’s cricket team)ಕ್ರಿಕೆಟ್ ತಂಡದ ಜೂಲನ್‌ ಗೋಸ್ವಾಮಿಯವರ (Julan Goswami) ಪಾತ್ರದಲ್ಲಿ ಮಿಂಚುವ ಬಗ್ಗೆ ಸುಳಿವು ನೀಡಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಟೀಸರ್ ಹರಿಬಿಟ್ಟಿದ್ದಾರೆ.

ಚಕ್ದಾ ಎಕ್ಸ್‌ಪ್ರೆಸ್ ಚಿತ್ರದಲ್ಲಿ, ರಬ್ ನೆ ಬನಾ ದೇ ಜೋಡಿ ನಟಿ ಮಾಜಿ ಭಾರತೀಯ ಮಹಿಳಾ ಕ್ರಿಕೆಟಿಗರಾದ ಜೂಲನ್‌ ಗೋಸ್ವಾಮಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಟೀಸರ್ ಹೊರಬಿದ್ದಾಗಿನಿಂದ, ನೆಟ್ಟಿಗರು ನಟಿ ಜೂಲನ್ ಗೋಸ್ವಾಮಿಯ ಬಗ್ಗೆ ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸಿದ್ದಾರೆ. ಭಾರತದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಎಲ್ಲಾ ಉದಯೋನ್ಮುಖ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಚಕ್ಡಾ ಎಕ್ಸ್‌ಪ್ರೆಸ್ ಅನ್ನು ಪ್ರೋಸಿತ್ ರಾಯ್ ನಿರ್ದೇಶಿಸಿದ್ದಾರೆ.
ಜೂಲನ್‌ ಗೋಸ್ವಾಮಿ ಯಾರು?
ಈ ಚಿತ್ರವು ಗೋಸ್ವಾಮಿಯವರ ಸ್ಪೂರ್ತಿದಾಯಕ ಜೀವನ ಪಯಣವನ್ನು ಬೆಳ್ಳಿತೆರೆಗೆ ತರಲಿದೆ. ಜೂಲನ್ ಗೋಸ್ವಾಮಿ ಮಹಿಳಾ ಕ್ರಿಕೆಟ್‍ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರು. ಇವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯವರು. ಜೂಲನ್ ಗೋಸ್ವಾಮಿ ಫುಟ್ಬಾಲ್ ಅಭಿಮಾನಿಯಾಗಿದ್ದರು. 1997ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಂದ್ಯವನ್ನು ನೋಡಿದ ನಂತರ ಕ್ರಿಕೆಟ್ ಕಡೆಗೆ ಒಲವು ತೋರಿದರು.

2002ರಲ್ಲಿ 19ನೇ ವಯಸ್ಸಿನಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಕ್ರಿಕೆಟ್ ಪಂದ್ಯಾವಳಿ ಮೂಲಕ ಕ್ರಿಕೆಟ್ ಜಗತ್ತಿಗೆ ಪಾದರ್ಪಣೆ ಮಾಡಿದರು. ಬಲಗೈ ಬ್ಯಾಟಿಂಗ್ ಪಟುವಾದ ಗೋಸ್ವಾಮಿ ಬಲಗೈ ಮಧ್ಯಮ ವೇಗದ ಬೌಲಿಂಗ್ ಮಾಡುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಮಹಿಳಾ ವೇಗದ ಬೌಲರ್‍ಗಳಲ್ಲಿ ಒಬ್ಬರಾದರು. 2008 ರಿಂದ 2011ರವರೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು.

ಗೌರವಾರ್ಥವಾಗಿ ಭಾರತೀಯ ಅಂಚೆ ಚೀಟಿ
2007ರಲ್ಲಿ ಐಸಿಸಿ ಮಹಿಳಾ ವರ್ಷದ ಆಟಗಾರ್ತಿ, 2011ರಲ್ಲಿ ಅತ್ಯುತ್ತಮ ಮಹಿಳಾ ಕ್ರಿಕೆಟಿಗರು ಎಂಬ ಪಟ್ಟ ಪಡೆದ ಅವರು ಎಂ.ಎ ಚಿದಂಬರಂ ಟ್ರೋಫಿಯನ್ನು ಗೆದ್ದರು. ಜನವರಿ 2016ರಲ್ಲಿ ಐಸಿಸಿ ಮಹಿಳಾ ಏಕದಿನ ಸರಣಿ ಬೌಲಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದರು. ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಗೋಸ್ವಾಮಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಯೂ ಇದೆ. 2017ರ ಮಹಿಳಾ ಕ್ರಿಕೆಟ್ ವಿಶ್ವಕಪ್‍ನ ಫೈನಲ್‍ಗೆ ತಲುಪಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭಾಗವಾಗಿದ್ದರು. 2010ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ಎರಡು ವರ್ಷಗಳ ನಂತರ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. 2018ರಲ್ಲಿ, ಅವರು ಶ್ರೀಲಂಕಾ ವಿರುದ್ಧ ತಮ್ಮ 300ನೇ ಅಂತಾರಾಷ್ಟ್ರೀಯ ವಿಕೆಟ್ ಪಡೆದರು. ಏಪ್ರಿಲ್ 2018ರಲ್ಲಿ, ಆಕೆಯ ಗೌರವಾರ್ಥವಾಗಿ ಭಾರತೀಯ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.

ಮಹಿಳೆಯರ ಕ್ರಿಕೆಟ್ ಗೆ ಪ್ರೋತ್ಸಾಹ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಜೂಲನ್ ಅವರು ಹೋರಾಟದ, ಅತ್ಯಂತ ಅನಿಶ್ಚಿತ ಕ್ರಿಕೆಟ್ ವೃತ್ತಿಜೀವನ ಮೂಲಕ ತಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದವರು. ಮುಂದಿನ ಪೀಳಿಗೆಯ ಹುಡುಗಿಯರು ಕ್ರಿಕೆಟ್ ಅನ್ನು ವೃತ್ತಿಯಾಗಿ ಪಡೆದುಕೊಂಡು ಮುಂದುವರಿಯಲು ಸಾಧ್ಯವಿಲ್ಲ ಎಂಬ ಪೂರ್ವಾಗ್ರಹಪೀಡಿತ ಆಲೋಚನೆಗಳನ್ನು ಸರಿಗಟ್ಟುವಂತೆ ಮಾಡಿದವರು. ಮಹಿಳೆಯರು ಕ್ರಿಕೆಟ್ ಆಡಬಹುದು ಎಂದು ತೋರಿಸಿಕೊಟ್ಟವರು.

ಚಕ್ಡಾ ಎಕ್ಸ್‌ಪ್ರೆಸ್ ದಿಟ್ಟ ಹೆಜ್ಜೆ
ಎಷ್ಟೇ ಅಡೆತೆಗಳ ನಡುವೆಯೂ ಉತ್ಸಾಹ ಮತ್ತು ಪರಿಶ್ರಮವು ಜಯಗಳಿಸುತ್ತದೆ ಎಂಬುದಕ್ಕೆ ಅವರ ಜೀವನವು ಜೀವಂತ ಸಾಕ್ಷಿಯಾಗಿದೆ ಮತ್ತು ಚಕ್ಡಾ ಎಕ್ಸ್‌ಪ್ರೆಸ್ ಆಗ ಮಹಿಳಾ ಕ್ರಿಕೆಟ್‍ಗೆ ಅಷ್ಟೊಂದು ಪ್ರಾಮುಖ್ಯತೆ ಇಲ್ಲದ ಜಗತ್ತಿನಲ್ಲಿ ಅತ್ಯಂತ ನಿರ್ಣಾಯಕ ದಿಟ್ಟ ಹೆಜ್ಜೆ ಇಟ್ಟು ಮುನ್ನಡೆದುದರ ನೋಟವಾಗಿದೆ. ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಮತ್ತು ನಾವು ಮಹಿಳೆಯರನ್ನು ಅತ್ಯುತ್ತಮವಾಗಿ ಸಬಲೀಕರಣಗೊಳಿಸಬೇಕು ಇದರಿಂದ ಭಾರತದಲ್ಲಿ ಮಹಿಳೆಯರಿಗೆ ಕ್ರೀಡೆಯು ಪ್ರವರ್ಧಮಾನಕ್ಕೆ ಬರಬಹುದು. ಭಾರತದಲ್ಲಿ ಮಹಿಳಾ ಕ್ರಿಕೆಟ್‍ನಲ್ಲಿ ಕ್ರಾಂತಿಯನ್ನುಂಟು ಮಾಡಿದ್ದಕ್ಕಾಗಿ ನಾವೆಲ್ಲರೂ ಜೂಲನ್‌ ಮತ್ತು ಅವರ ತಂಡದ ಸಹ ಆಟಗಾರರಿಗೆ ನಮನ ಸಲ್ಲಿಸಬೇಕು.

ಅಧ್ಭುತ ಕಥೆ
ಮಹಿಳೆಯಾಗಿ, ಜೂಲನ್‌ ಅವರ ಕಥೆಯನ್ನು ಕೇಳಲು ನನಗೆ ಹೆಮ್ಮೆಯಾಯಿತು ಮತ್ತು ಪ್ರೇಕ್ಷಕರಿಗೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಅವರ ಜೀವನವನ್ನು ತೆರೆ ಮೇಲೆ ತರಲು ಪ್ರಯತ್ನಿಸುವುದು ನನಗೆ ಗೌರವವಾಗಿದೆ. ಕ್ರಿಕೆಟ್ ಆಡುವ ರಾಷ್ಟ್ರವಾಗಿ, ನಾವು ನಮ್ಮ ಮಹಿಳಾ ಕ್ರಿಕೆಟಿಗರಿಗೆ ಅವರ ಗೌರವವನ್ನು ನೀಡಬೇಕು. ಜೂಲನ್‌ಳ ಕಥೆಯು ನಿಜವಾಗಿಯೂ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಒಂದು ಅಧ್ಭುತ ಕಥೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಅನುಷ್ಕಾ ಈ ಕಥೆಗೆ ಸರಿಯಾದ ಅರ್ಹ ನಟಿ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ. ಕಮ್‌ಬ್ಯಾಕ್‌ ಗೆ ಒಳ್ಳೆ ಎಂಟ್ರಿ ಎಂದು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *