‘ಕಾಂಗ್ರೆಸ್ 5 ವರ್ಷ ಅಧಿಕಾರದಲ್ಲಿದ್ದರೂ ಡಿಪಿಆರ್ ನ್ನು ಸಲ್ಲಿಸಲಾಗಿಲ್ಲ, ಮೇಕೆದಾಟು ಪಾದಯಾತ್ರೆ ರಾಜಕೀಯ ಪ್ರೇರಿತ: ಸಿಎಂ ಬೊಮ್ಮಾಯಿ

ಬೆಂಗಳೂರು: ಅತ್ತ ರಾಮನಗರ ಜಿಲ್ಲೆಯ ಕನಕಪುರ ಸಂಗಮದಿಂದ ಕಾಂಗ್ರೆಸ್ ಮೇಕೆದಾಟು ಯೋಜನೆಯ ಪಾದಯಾತ್ರೆಗೆ ಚಾಲನೆ ನೀಡಿ ಕಾಂಗ್ರೆಸ್ ನಾಯಕರು ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ, ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಪಾದಯಾತ್ರೆಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಬೆಳಗ್ಗೆ 11 ಗಂಟೆಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ನನ್ನ ನಿವಾಸದಲ್ಲಿ ಪ್ರಮುಖ ಸಚಿವರ ಸಭೆ ಕರೆದಿದ್ದೇನೆ. ಅದರಲ್ಲಿ ಬೆಂಗಳೂರು ನಗರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು, ಮಾಡಬೇಕಾದ ಕೆಲಸಗಳು ಹಾಗೂ ಮೇಕೆದಾಟು ಯೋಜನೆಯ ಸಂಬಂಧ, ಪಾದಯಾತ್ರೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

 

ಕಾಂಗ್ರೆಸ್ ನವರು 5 ವರ್ಷ ಅಧಿಕಾರದಲ್ಲಿದ್ದರು, ಸಮ್ಮಿಶ್ರ ಸರ್ಕಾರದಲ್ಲಿ ಡಿ ಕೆ ಶಿವಕುಮಾರ್ ಅವರು ಕೂಡ ನೀರಾವರಿ ಸಚಿವರಾಗಿದ್ದರು. ಹಾಗಾದರೆ ಆಗ ಅವರು ಮೇಕೆದಾಟು ಯೋಜನೆಯ ಬಗ್ಗೆ ಏನು ಮಾಡಿದರು. ಡಿಪಿಆರ್ ವರದಿಯನ್ನು ಆಗ ಅವರು ಸರಿಯಾಗಿ ಸಲ್ಲಿಕೆ ಮಾಡಿದ್ದರೆ ಯೋಜನೆ ಈಡೇರುತ್ತಿರಲಿಲ್ಲವೇ, ಸಮ್ಮಿಶ್ರ ಸರ್ಕಾರ ಬಂದ ಮೇಲೆ ಡಿಪಿಆರ್ ಬಂದಿರುವುದು, ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಡಿಪಿಆರ್ ನ್ನು ಸರಿಯಾಗಿ ತೆಗೆದುಕೊಂಡು ಹೋಗಿಲ್ಲ ಎಂದು ಗರಂ ಆಗಿ ಹೇಳಿದರು.

ಕಾಂಗ್ರೆಸ್ ನವರಿಗೆ ಮೇಕೆದಾಟು ಯೋಜನೆ ಬೇಕಾಗಿಲ್ಲ, ರಾಜಕಾರಣ ಬೇಕಾಗಿದೆ. ಯೋಜನೆಯ ಡಿಪಿಆರ್ ಮಾಡಲು ನಾಲ್ಕು ವರ್ಷ ತೆಗೆದುಕೊಂಡಿದ್ದಾರೆ. ಸಾಧ್ಯತೆ ವರದಿ ಮಾತ್ರ ಸಲ್ಲಿಕೆ ಮಾಡಿದ್ದಾರೆ, ಇದು ಕಾಂಗ್ರೆಸ್ ನವರ ಸಾಧನೆ, ಬೆಟ್ಟ ಅಗೆದು ಇಲಿ ತೆಗೆದಿದ್ದಾರೆ. ಇದು ಅವರ ಸಾಧನೆ ಎಂದು ವ್ಯಂಗ್ಯವಾಡಿದರು.

ಕೋವಿಡ್ ನಿಯಮ ಉಲ್ಲಂಘಿಸಿ ವೀಕೆಂಡ್ ಕರ್ಫ್ಯೂ ವೇಳೆ ಪಾದಯಾತ್ರೆ ಮಾಡುತ್ತಿರುವುದಕ್ಕೆ ನೊಟೀಸ್ ನೀಡಲಾಗಿದೆ. ನಮ್ಮ ಅಧಿಕಾರಿಗಳು ಕೂಡ ಹೋಗಿ ಪಾದಯಾತ್ರೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅವರು ಉಡಾಫೆಯಿಂದ ಮಾಡುತ್ತಿದ್ದಾರೆ. ಅದಕ್ಕೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

ಚುನಾವಣೆ ಹತ್ತಿರ ಬಂದಾಗ ಮೇಕೆದಾಟು ಕಾಂಗ್ರೆಸ್ ನವರಿಗೆ ನೆನಪಾಗಿದೆ: ಈ ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಬಂದಿದೆ. ಕಳೆದ ಮೂರು ವರ್ಷದಿಂದ ಕಾಂಗ್ರೆಸ್ ನವರು ಮೇಕೆದಾಟು ಬಗ್ಗೆ ಎಲ್ಲಿಯೂ ಚರ್ಚೆ ಮಾಡಿಲ್ಲ, ಸರ್ಕಾರಕ್ಕೆ ಒತ್ತಾಯ ಮಾಡಿಲ್ಲ, ಈಗ 2023ರ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಾಗ ಏಕಾಏಕಿ ರಾಜಕೀಯ ಪಾದಯಾತ್ರೆ ಆರಂಭಿಸಿದ್ದಾರೆ. ತಾವು ಅಧಿಕಾರದಲ್ಲಿದ್ದಾಗ ಕೆಲಸ ಮಾಡಿಲ್ಲ ಎನ್ನುವ ಅಪರಾಧಿ ಮನೋಭಾವ ಕಾಂಗ್ರೆಸ್ ನವರನ್ನು ಕಾಡುತ್ತಿದೆ. ಆ ಅಪರಾಧಿ ಮನೋಭಾವವನ್ನು ದೂರ ಮಾಡಲು ಸಲುವಾಗಿ, ಜನರನ್ನು ಮರುಳು ಮಾಡುವ ಸಲುವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಸ್ಪಷ್ಟವಾಗಿ ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ ಎಂದರು.

ಕಾಂಗ್ರೆಸ್ ನವರು ಮೇಕೆದಾಟು ಆಗಲಿ, ಯಾವ ನೀರಾವರಿ ಯೋಜನೆ ಬಗ್ಗೆಯೂ ಬದ್ಧತೆಯಿಂದ ಕೆಲಸ ಮಾಡಿಲ್ಲ, ಕೃಷ್ಣೆಯ ಬಗ್ಗೆ ಪಾದಯಾತ್ರೆ ಮಾಡಿದ್ದು ಏನಾಯ್ತು, ಇದೇ ತರಹ ಕೂಡಲಸಂಗಮದಲ್ಲಿ ಹೋಗಿ ಆಣೆ ಮಾಡಿದ್ದರು, ಪ್ರತಿ ವರ್ಷ 10 ಸಾವಿರ ಕೋಟಿ ನೀಡುತ್ತೇವೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊಡುತ್ತೇವೆ ಎಂದವರು ಇಡೀ 5 ವರ್ಷದ ಆಡಳಿತದಲ್ಲಿ 7 ಸಾವಿರ ಕೋಟಿ ರೂಪಾಯಿ ಕೂಡ ನೀಡಿರಲಿಲ್ಲ ಎಂದು ಸಿಎಂ ಆರೋಪಿಸಿದರು.

ಜನರನ್ನು ಎಲ್ಲಾ ಸಂದರ್ಭದಲ್ಲಿ ಮರುಳು ಮಾಡಲು ಸಾಧ್ಯವಿಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾದ ಮೇಲೆ ಡಿಪಿಆರ್ ಅನುಮತಿಗೆ ಕೇಂದ್ರ ಜಲ ಆಯೋಗದಿಂದ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಈಗಾಗಲೇ ಹೋಗಿದೆ. ಅದಕ್ಕೆ ಇದೇ ತಿಂಗಳಲ್ಲಿ ಸಭೆ ನಡೆದು ತೀರ್ಮಾನವಾಗುತ್ತದೆ. ಸುಪ್ರೀಂ ಕೋರ್ಟ್ ನಲ್ಲಿ ಕೂಡ ಇದೇ ತಿಂಗಳು ವಿಚಾರಣೆ ನಡೆಯುತ್ತದೆ. ಕಾನೂನು ತಜ್ಞರ ಜೊತೆಗೆ ನಾವು ಚರ್ಚಿಸುತ್ತಿದ್ದೇವೆ. ಪರಿಸರ ಇಲಾಖೆಯಿಂದ ಅನುಮತಿಗೆ ಕೂಡ ಕಾಯುತ್ತಿದ್ದೇವೆ ಎಂದು ವಿವರ ನೀಡಿದರು.

ಜವಾಬ್ದಾರಿಯುತ ಪಕ್ಷ ಕಾನೂನು ಅಡ್ಡಿ, ಆತಂಕಗಳು, ಯೋಜನೆಗೆ ಇರುವ ಸವಾಲುಗಳನ್ನು ಅರ್ಥ ಮಾಡಿಕೊಂಡಿದ್ದರೆ ಇಂದು ಪಾದಯಾತ್ರೆ ಮಾಡುತ್ತಿರಲಿಲ್ಲ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *