ಕೊವಿಡ್ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ ಮಾಡಬಾರದು: ಹೈಕೋರ್ಟ್
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ (Congress) ನಾಯಕರು ಕೊರೊನಾ ನಿಮಯಗಳನ್ನು ಗಾಳಿಗೆ ತೂರಿ ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದರು. ಈ ನಡುವೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅನೇಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸುವಂತೆ ಹೈಕೋರ್ಟ್ ತಿಳಿಸಿದೆ. ಸದ್ಯ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ್ದು, ಕೆಪಿಸಿಸಿ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದಾರೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದು ಕೆಪಿಸಿಸಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಮಾಹಿತಿ ನೀಡಿದ್ದಾರೆ. ಜತೆಗೆ ಬೇರೆ ಪಕ್ಷಗಳ ಕಾರ್ಯಕ್ರಮ ನಡೆಯುತ್ತಿವೆ. ಸರ್ಕಾರದ ತಾರತಮ್ಯ ಧೋರಣೆ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.
ಕೊವಿಡ್ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ, ಧರಣಿಗೆ ಅವಕಾಶ ನೀಡಬಾರದು. ಕೊವಿಡ್ ಅವಧಿಯ ಎಸ್ಒಪಿ ಉಲ್ಲಂಘನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಪಿಐಎಲ್ ಇತ್ಯರ್ಥ ಪಡಿಸಿದೆ. ಸಮಾರಂಭ ತಡೆಗೆ ಸರ್ಕಾರದ ಕ್ರಮಗಳೇನು? ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಅನ್ವಯವಾಗಬೇಕಲ್ಲವೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಬಳಿಕ ಮಾತನಾಡಿದ ಹೈಕೋರ್ಟ್ ಸಿಜೆ (ಹಿರಿಯ ನ್ಯಾಯಮೂರ್ತಿ) ರಿತುರಾಜ್ ಅವಸ್ತಿ, ಎಲ್ಲಾ ರಾಜಕೀಯ ಪಕ್ಷಗಳಿಗೂ ಎಸ್ಒಪಿ ಅನ್ವಯವಾಗುತ್ತದೆ. ಯಾವ ರಾಜಕೀಯ ಪಕ್ಷಗಳೂ ನಿಯಮ ಮೀರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.