‘ಕೊಹ್ಲಿಯನ್ನು ಬ್ಯಾನ್ ಮಾಡಿ’ ಭಾರತದ ನಾಯಕನ ವಿರುದ್ಧ ನೆಟ್ಟಿಗರು ಕಿಡಿ!

ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ.
  • ಡಿಆರ್‌ಎಸ್‌ ಸಂಬಂಧ ಕೊಹ್ಲಿ ನಡೆದುಕೊಂಡ ವರ್ತನೆಗೆ ನೆಟ್ಟಿಗರು ಆಕ್ರೋಶ.
  • ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಆಫ್ರಿಕಾ.

ಕೇಪ್ ಟೌನ್: ದಕ್ಷಿಣ ಆಫ್ರಿಕಾ ನಾಯಕ ಡೀನ್‌ ಎಲ್ಗರ್‌ ಅವರ ಎಲ್‌ಬಿಡಬ್ಲ್ಯು ಸಂಬಂಧ ಡಿಆರ್‌ಎಸ್‌ ತೀರ್ಪು ನಾಟ್‌ಔಟ್‌ ಬಂದ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಸ್ಟಂಪ್ಸ್‌ ಮೈಕ್‌ ಬಳಿ ನಡೆದುಕೊಂಡ ಹಾದಿಯ ಬಗ್ಗ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ನ್ಯೂಲೆಂಡ್ಸ್‌ ಮೈದಾನದಲ್ಲಿ 212 ರನ್‌ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಇನಿಂಗ್ಸ್‌ನ 27ನೇ ಓವರ್‌ನಲ್ಲಿ ಆರ್‌ ಅಶ್ವಿನ್‌ ಎಸೆತದಲ್ಲಿ ಡೀನ್‌ ಎಲ್ಗರ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅಂದರಂತೆ ಸ್ಟ್ರೈಕ್‌ ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಕೂಡ ಔಟ್‌ ಎಂದು ತೀರ್ಪು ಕೊಟ್ಟಿದ್ದರು. ಆದರೆ, ಡಿಆರ್‌ಎಸ್‌ ತೀರ್ಮಾನ ಎಲ್ಲವನ್ನೂ ಬದಲಾಯಿಸಿ ಬಿಟ್ಟಿತು.

3ಡಿ ಸ್ಪಿನ್‌ ವಿಷನ್‌ ತಂತ್ರಜ್ಞಾನದಲ್ಲಿ ಚೆಂಡು ವಿಕೆಟ್‌ಗೆ ಬಡಿಯದೇ ಮೇಲೆ ಹೋಗುತ್ತಿದೆ ಎಂದು ತೋರಿಸಿತು. ಆದರೆ, ಚೆಂಡು ಎಲ್ಗರ್‌ ಅವರ ಮಂಡಿಗಿಂತಲೂ ಕೆಳಗೆ ಬಡಿದಿದ್ದ ಕಾರಣ ಅದು ವಿಕೆಟ್‌ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂಬಂತ್ತಿತ್ತು. ಡಿಆರ್‌ಎಸ್‌ ತೀರ್ಪು ಕಂಡ ಆನ್‌ ಫೀಲ್ಡ್‌ ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಕೂಡ ‘ಇದು ಅಸಾಧ್ಯ’ ಎಂದು ಹೇಳಿದ್ದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ.

ಡಿಆರ್‌ಎಸ್‌ ತೀರ್ಪು ಕಂಡು ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಕೆಂಡಾಮಂಡಲವಾದರು. ಅಷ್ಟೇ ಅಲ್ಲದೆ ಸ್ಟಂಪ್‌ ಮೈಕ್‌ ಬಳಿ ತೆರಳಿ “ಕ್ಯಾಮೆರಾಮನ್‌ಗಳು ಮೊದಲು ನಿಮ್ಮ ತಂಡದ ಕಡೆಗೆ ಫೋಕಸ್‌ ಮಾಡಿ, ಎದುರಾಳಿ ತಂಡವನ್ನಲ್ಲ,” ಎಂದರು. ಟೀಮ್ ಇಂಡಿಯಾ ವೈಸ್‌ ಕ್ಯಾಪ್ಟನ್‌ ಕೆಎಲ್‌ ರಾಹುಲ್‌ ಕೂಡ ಮಾತಿಗಳಿದು, “ಟೀಮ್ ಇಂಡಿಯಾದ 11 ಆಟಗಾರರ ವಿರುದ್ಧ ಇಡೀ ದಕ್ಷಿಣ ಆಫ್ರಿಕಾ ಆಡುತ್ತಿದೆ,” ಎಂದು ಗುಡುಗಿದ್ದರು.

ಮೈಕ್‌ ಬಳಿ ತೆರಳಿ ವಿರಾಟ್‌ ಕೊಹ್ಲಿ ನಡೆದುಕೊಂಡ ಹಾದಿಯ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಭಿಮಾನಿಯೊಬ್ಬ, “ಈ ಘಟನೆಯಿಂದ ಅವರಿಗೆ(ಕೊಹ್ಲಿ) ಕೋಪ ಬಂದಿದೆ. ನನಗೂ ಬಂದಿದೆ. ಆದರೆ ಸಾಕ್ಲ್ಯಾಧಾರವಿಲ್ಲದೆ ಎದುರಾಳಿ ತಂಡ ನಮಗೆ ಮೋಸ ಮಾಡುತ್ತಿದೆ ಎಂದು ಸ್ಟಂಪ್ಸ್‌ ಮೈಕ್ ಬಳಿ ಕೂಗುವುದು ಸರಿಯಲ್ಲ. ಈ ದುರ್ನಡತೆಯಿಂದಾಗಿ ವಿರಾಟ್‌ ಕೊಹ್ಲಿಯನ್ನು ಒಂದು ಪಂದ್ಯಕ್ಕೆ ಬ್ಯಾನ್‌ ಮಾಡಬೇಕೆಂದು,” ಟ್ವೀಟ್‌ ಮಾಡಿದ್ದಾರೆ.

 

“ವಿರಾಟ್‌ ಕೊಹ್ಲಿ ಹಾಗೂ ಅವರ ತಂಡ ಫಾರ್ಮ್‌ನಲ್ಲಿ ಇಲ್ಲ, ಈ ಕಾರಣದಿಂದಾಗಿ ಡೀನ್ ಎಲ್ಗರ್ ಅವರ ಡಿಆರ್‌ಎಸ್‌ ತೀರ್ಪು ವಿರುದ್ಧ ಕಿಡಿಕಾರುತ್ತಿದ್ದಾರೆ. ಹೌದು ಡಿಆರ್‌ಎಸ್‌ ತಂತ್ರಜ್ಞಾನದಲ್ಲಿ ಕೆಲವು ನ್ಯೂನತೆಗಳಿರುವುದನ್ನು ನಾನು ಒಪ್ಪುತ್ತೇನೆ. ಒಂದು ವೇಳೆ ಈ ನಿರ್ಧಾರ ನಿಮ್ಮ ಪರವಾಗಿ ಬಂದಾಗ ಇತರರು ಕೂಡ ನಿಮ್ಮನ್ನು ಈ ರೀತಿ ಕೆಣಕಬಹುದಲ್ಲವೆ! ನಿಜ ಹೇಳಬೇಕೆಂದರೆ ಭಾರತ ತಂಡದ ಬ್ಯಾಟಿಂಗ್‌ ಅತ್ಯಂತ ಕಳಪೆಯಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ಅದ್ಭುತವಾಗಿತ್ತು. ಈ ಕಾರಣದಿಂದಲೇ ಪಂದ್ಯ ಆತಿಥೇಯರ ಕೈಯಲ್ಲಿದೆ,” ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಈ ಘಟನೆ ನಡೆದ ಬಳಿಕ ವಿರಾಟ್‌ ಕೊಹ್ಲಿ ನಿಯಮಿತವಾಗಿ ಡೀನ್‌ ಎಲ್ಗರ್‌ ಅವರನ್ನು ಸ್ಲೆಡ್ಜ್‌ ಮಾಡುತ್ತಲೇ ಇದ್ದರು. ಡಿಆರ್‌ಎಸ್‌ ತೀರ್ಪಿನಿಂದ ಬಚಾವ್‌ ಆದ ಬಳಿಕ ಮತ್ತೊಮ್ಮೆ ಡೀನ್‌ ಎಲ್ಗರ್‌, ಜಸ್‌ಪ್ರಿತ್‌ ಎಸೆತದಲ್ಲಿ ಚೆಂಡನ್ನು ಪ್ಯಾಡ್‌ ಮೇಲೆ ಹಾಕಿಕೊಂಡಿದ್ದರು. ಈ ವೇಳೆ ಕೊಹ್ಲಿ ‘ಚೆಂಡು ಭುಜಕ್ಕಿಂತ ಮೇಲೆ ಹೋಗುತ್ತಿರುವುದನ್ನು ಡಿಆರ್‌ಎಸ್‌ ತೋರಿಸಬಹುದು’ ಎಂದು ಕಿಚಾಯಿಸಿದರು.

ದೀರ್ಘಾಕಾಲ ಭಾರತದ ವೇಗಿಗಳ ಸವಾಲನ್ನು ಮೆಟ್ಟಿ ನಿಂತ ಡೀನ್‌ ಎಲ್ಗರ್‌ ಅವರನ್ನು ಕೊನೆಗೂ ಜಸ್‌ಪ್ರಿತ್‌ ಬುಮ್ರಾ ಔಟ್‌ ಮಾಡಿದರು. ಬ್ಯಾಟ್‌ಗೆ ತಾಗಿ ಬಂದ ಚೆಂಡನ್ನು ಸ್ಟಂಪ್‌ಗಳ ಹಿಂದೆ ರಿಷಭ್‌ ಪಂತ್ ಅತ್ಯುತ್ತಮ ಪಡೆದುಕೊಂಡರು.

 

ಅಂದಹಾಗೆ ಈ ವೇಳೆ ಅಂಪೈರ್‌ ನಾಟ್‌ಔಟ್‌ ನೀಡಿದ್ದರು. ಆದರೆ ವಿರಾಟ್‌ ಕೊಹ್ಲಿ ರಿವ್ಯೂವ್ ಪಂಡೆದುಕೊಂಡರು. ಅದರಂತೆ ಬ್ಯಾಟ್‌ಗೆ ಚೆಂಡು ತಾಗಿರುವುದು ಸ್ಪಷ್ಟವಾಗಿತ್ತು. ಆ ಮೂಲಕ ಭಾರತ ತಂಡ ಎದುರಾಳಿ ತಂಡದ ಪ್ರಮುಖ ವಿಕೆಟ್ ಕಬಳಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ 2 ವಿಕೆಟ್‌ ನಷ್ಟಕ್ಕೆ 101 ರನ್‌ ಗಳಿಸಿದ್ದು, ಗೆಲುವಿಗೆ ಇನ್ನು 111 ರನ್ ಗಳಿಸಬೇಕಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *