ಕಲಬುರಗಿ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಮಂಡನೆ | 234.44 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ
ನಾರಿಯರಿಗೆ ಸ್ವಯಂ ಉದ್ಯೋಗಕ್ಕೆ ಪಿಂಕ್ ಆಟೋ, ಪ್ರತಿ ವಾರ್ಡ್ ಗೆ ತುರ್ತು ಅಭಿವೃದ್ದಿ ಕಾರ್ಯಕ್ಕೆ 10 ಲಕ್ಷ ರೂ. ಘೋಷಣೆ
ಕಲಬುರಗಿ,ಮಾ.31(ಕರ್ನಾಟಕ ವಾರ್ತೆ) ಕಲಬುರಗಿ ಮಹಾನಗರ ಪಾಲಿಕೆಯ 2026-27ನೇ ಸಾಲಿನ 234.44 ಕೋಟಿ ರೂ. ಮೊತ್ತದ ಮುಂಗಡ ಪತ್ರ ಮಂಗಳವಾರ ಮಂಡಿಸಲಾಗಿದ್ದು, ನಾರಿಯರಿಗೆ ಪಿಂಕ್ ಆಟೋ, ಪ್ರತಿ ವಾರ್ಡ್ ಗೆ ತುರ್ತು ಅಭಿವೃದ್ದಿ ಕಾರ್ಯ ಕೈಗೊಳ್ಳಲು ತಲಾ10 ಲಕ್ಷ ರೂ. ಗಳ ಅನುದಾನದಂತಹ ಹಲವು ನೂತನ ಯೋಜನೆಗಳನ್ನು ನಗರದ ನಿವಾಸಿಗಳಿಗೆ ಪಾಲಿಕೆ ಘೋಷಣೆ ಮಾಡಿದೆ.

ನಗರದ ಇಂದಿರಾ ಸ್ಮಾರಕ (ಟೌನ್ ಹಾಲ್) ಭವನದಲ್ಲಿ ಮಹಾಪೌರರಾದ ವರ್ಷಾ ರಾಜೀವ ಜಾನೆ ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ತುರ್ತು ಮುಂಗಡ ಪತ್ರ ಮಂಡನೆ ಸಭೆಯಲ್ಲಿ ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ರಮೇಶ್ ಕಮಕನೂರು ಅವರು ವಿವಿಧ ಮೂಲದಿಂದ 227.08 ಕೋಟಿ ರೂ. ಆದಾಯ ನಿರೀಕ್ಷೆಯೊಂದಿಗೆ ಮೂಲಸೌಕರ್ಯ, ಜನಕಲ್ಯಾಣ, ನೂತನ ಯೋಜನೆ ಅನುಷ್ಠಾನಕ್ಕೆ 234.44 ಕೋಟಿ ರೂ. ವೆಚ್ಚದ ಅಂದಾಜುದೊಂದಿಗೆ ಸುಮಾರು 7.35 ಕೋಟಿ ರೂ.ಗಳ ಕೊರತೆಯ ಬಜೆಟ್ ಮಂಡಿಸಿದೆ.

ನಗರದ ರಸ್ತೆ ಸ್ವಚ್ಛತೆ, ಘನತ್ಯಾಜ್ಯ ವಿಲೇವಾರಿ, ವಿದ್ಯುಚ್ಛಕ್ತಿ ಮತ್ತು ಇಂಧನ ನೈರ್ಮಲ್ಯ ಕಾಮಗಾರಿಗೆ ಅತಿ ಹೆಚ್ಚು 40 ಕೋಟಿ ರೂ. ಹಣ ಮೀಸಲಿಡಲಾಗಿದೆ. ಹೊಸ ರಸ್ತೆಗಳ ನಿರ್ಮಾಣಕ್ಕೆ 13 ಕೋಟಿ ರೂ., ನೀರು ಸರಬರಾಜು ಮತ್ತು ತೆರೆದ ಭಾವಿ ಅಭಿವೃದ್ಧಿಗೆ 9 ಕೋಟಿ ರೂ., ದೊಡ್ಡ ಚರಂಡಿಗಳ ನಿರ್ಮಾಣಕ್ಕೆ 7 ಕೋಟಿ ರೂ., ರಸ್ತೆ ಪಕ್ಕದ ಡ್ರೇನ್ ನಿರ್ಮಾಣಕ್ಕೆ 2 ಕೋಟಿ ರೂ., ನಗರದ ಹೊರವಲಯದಲ್ಲಿ ಸ್ವಾಗತ ಕಮಾನು ನಿರ್ಮಾಣಕ್ಕೆ 2 ಕೋಟಿ ರೂ., ಉದ್ಯಾನವನಗಳ ಅಭಿವೃದ್ದಿಗೆ 2.84 ಕೋಟಿ ರೂ., ನರ್ಸರಿ ಅಭಿವೃದ್ಧಿಗೆ 25 ಲಕ್ಷ ರೂ., ಮಳೆ ನಿರು ಕೊಯ್ಲು ಪದ್ದತಿ ಅಲವಡಿಕೆಗೆ 50 ಲಕ್ಷ ರೂ. ಹಂಚಿಕೆ ಮಾಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ 86 ಲಕ್ಷ ರೂ., ಶೇ.7.25 ಯೋಜನೆಯಡಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 20 ಲಕ್ಷ ರೂ. ಹಾಗೂ ಅಂಗವಿಕಲರ ಕಲ್ಯಾಣಕ್ಕೆ ಶೇ.5 ನಿದಿಯಡಿ 10 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಬೀದಿ ದೀಪಗಳ ನಿರ್ವಹಣೆಗಾಗಿ 303.73 ಲಕ್ಷ ರೂ. ಮತ್ತು ವಿಸ್ತರಣೆಗೆ 50 ಲಕ್ಷ ರೂ., ಶೌಚಾಲಯ ಮತ್ತು ಮೂತ್ರಾಲಯ ನಿರ್ಮಾಣಕ್ಕೆ 76.74 ಲಕ್ಷ ರೂ., ತೃತೀಯ ಲಿಂಗಿಗಳಿಗೆ ವಿಶೇಷ ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಇದಲ್ಲದೆ ಹೊಸ ಬಡಾವಣೆಗಳ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ತೆಗೆದಿರಿಸಲಾಗಿದೆ.

ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಸುಂದರ ನಗರದ ಪರಿಕಲ್ಪನೆಯೊಂದಿಗೆ ಬಜೆಡ್ ಮಂಡಿಸಿರುವೆ ಎಂದು ಅನುಪಮಾ ರಮೇಶ ಕಮಕನೂರ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ನಗರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್:
ಬಜೆಟ್ ಮಂಡನೆ ನಂತರ ನಡೆದ ಚರ್ಚೆಯಲ್ಲಿ ಮಹಾಪೌರರಾದ ವರ್ಷಾ ರಾಜೀವ ಜಾನೆ ಮಾತನಾಡಿ, ಕಲಬುರಗಿಯನ್ನು ಸುಂದರ, ಸ್ವಚ್ಛ ಹಾಗೂ ಪರಿಸರ ಸ್ನೇಹಿ ನಗರವನ್ನಾಗಿ ರೂಪಿಸುವ ಗುರಿಯೊಂದಿಗೆ ಸರ್ವಾಂಗೀಣ ಅಭಿವೃದ್ದಿಯ ವಿಶಾಲ ದೃಷ್ಟಿಕೋನವುಳ್ಳ ಬಜೆಟ್ ಇದಾಗಿದೆ. ಸುಸ್ಥಿರ ಅಭಿವೃದ್ಧಿ, ನಾರಿಯರ ಸಬಲೀಕರಣಕ್ಕೆ ಹಲವು ವಿನೂತನ ಯೋಜನೆ ಘೋಷಿಸಿದೆ. ನಗರದ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ ಎಂದು ಬಜೆಟ್ ಕುರಿತು ಹರ್ಷ ವ್ಯಕ್ತಪಡಿಸಿದರು.
ನಾರಿಯರಿಗೆ ಪಿಂಕ್ ಆಟೋ:
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ನಗರದ 55 ವಾರ್ಡ್ ಗಳಿಗೆ ತಲಾ ಒಂದು “ಪಿಂಕ್ ಆಟೋ” ಒದಗಿಸುವ ಯೋಜನೆಯನ್ನು ಬಜೆಟ್ನಲ್ಲಿ ಘೊಷಿಸಲಾಗಿದೆ. ನಗರದ ನಾರಿಯರು ಸ್ವಯಂ ಉದ್ಯೋಗಕ್ಕೆ ಮುಂದಾಗಲು ಇದು ಮುನ್ನುಡಿ ಬರೆಯಲಿದೆ. ಇದಲ್ಲದೆ ಮಹಿಳೆಯರಿಗೆ ದ್ವಿಚಕ್ತ, ತ್ರಿಚಕ್ರ, ನಾಲ್ಕು ಚಕ್ರ ವಾಹನ ಚಾಲನಾ ತರಬೇತಿ ನೀಡಲು ಸಹ ಆಯವ್ಯಯದಲ್ಲಿ 3 ಕೋಟಿ ರೂ. ಹಣ ಮೀಸಲಿಟ್ಟಿದ್ದು, ನಿರುದ್ಯೋಗಿ ಯುವತಿಯರಿಗೆ ಇದು ಸಹಿ ಸುದ್ದಿಯಾಗಿದೆ.
ಮೇಯರ್ ವಿವೇಚನಾ ನಿಧಿ ಹೆಚ್ಚಳ:
ಇನ್ನು ಆಯವ್ಯಯದಲ್ಲಿ ಮೇಯರ್ ವಿವೇಚನಾ ನಿಧಿ 200 ಲಕ್ಷ ರೂ. ಗಳಿಗೆ ಹೆಚ್ಚಿಸಿದೆ. ಈ ಹಿಂದೆಲ್ಲ100 ಲಕ್ಷ ರೂ. ಇತ್ತು. ಹೊಸದಾಗಿ ಉಪ ಮೇಯರ್ ವಿವೇಚನಾ ನಿಧಿ ಸೃಷ್ಟಿಸಿದ್ದು, 100 ಲಕ್ಷ ರೂ. ಮೀಸಲಿಡಲಾಗಿದೆ. ಅದೇ ರೀತಿ ಆಯುಕ್ತರಿಗೆ 100 ಲಕ್ಷ ರೂ.ವಿವೇಚನಾ ನಿಧಿ ಬಳಕೆಗೆ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿದೆ.
ಬಜೆಟ್ ವಿಶೇಷ ಸಭೆಯಲ್ಲಿ ಪಾಲಿಕೆಯ ಉಪಮಹಾಪೌರರಾದ ತೃಪ್ತಿ ಎಸ್. ಅಲ್ಲದ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಯಾಜ್ ಖಾನ್, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖ್ ಹುಸೇನ್, ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷೆ ಪುತಲಿ ಬೇಗಂ, ಆಡಳಿತ ಪಕ್ಷದ ನಾಯಕ ಶೇಖ್ ಅಜ್ಮಲ ಅಹ್ಮದ್ ಅಫ್ಜಲ ಗೋಲಾ, ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ, ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಉಪ ಆಯುಕ್ತೆ(ಅಭಿವೃದ್ದಿ) ಪ್ರಮೀಳಾ ಎಂ.ಕೆ., ಮುಖ್ಯ ಹಣಕಾಸು ಅಧಿಕಾರಿ ಸಂತೋಷ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
